ಆತ್ಮೀಯ ಸಾಹಿತ್ಯ ಬಂಧುಗಳೇ 
ಐಲೇಸಾದ  ಇವತ್ತಿನ ಈ ವಿನೂತನ  ಸಾಹಿತ್ಯ ಯಾನ,  ''ಗಾನ ವ್ಯಾಖ್ಯಾನ''ಕ್ಕೆ  ಅಭಿಮಾನ ಪೂರ್ವಕ ಸ್ವಾಗತ . ನಮ್ಮ ಈ ಸಂಕೀರ್ಣ ಜೀವನದಲ್ಲಿ  ''ಮುಂದೆ ಒಂದು ಗುರಿ ಹಿಂದೆ ಒಬ್ಬ ಗುರು ಇದ್ದರೆ''  ನಾವು ನಡೆಯುವ ದಾರಿ   ಸುಲಭವಾಗಿ ಮತ್ತು ಸುಗಮವಾಗಿ ಸಾಗುತ್ತದೆ ಅನ್ನೋದು ನಮ್ಮ ಪೂರ್ವಸೂರಿಗಳು  ಅನುಭವದಿಂದ ಕಂಡುಕೊಂಡ  ಸತ್ಯ . 

ಎಷ್ಟೋ ಸಾರಿ ದುರ್ಗಮವೆನಿಸಿದ  ಜೀವನ ಪಥ  ಇಂತವರ  ಮಾರ್ಗದರ್ಶಿತ್ವದಿಂದ  ಹೂವಿನ ಹಾಸಿನಂತಾಗಿರುವುದು   ಸರ್ವ ವೇದ್ಯ  . ಹಾಗಾಗಿ  ನಮ್ಮ  ಪ್ರತಿಯೊಂದು ನಡೆಗೂ ಇಂತಹ ಚಿಂತನ ಶೀಲರ ಸಾನಿಧ್ಯವಿದ್ದರೆ ಆ ನಡೆಗಳು  ಮುಂದೊಂದು ದಿನ 
ಇತಿಹಾಸವಾಗುವುದರಲ್ಲಿ  ಸಂಶಯವಿಲ್ಲ . 
ಇದನ್ನೆಲ್ಲಾ ಇಲ್ಲಿ ಹೇಳಲು ಒಂದು ಬಲವಾದ ಕಾರಣವಿದೆ . ಜನಸಾಮಾನ್ಯ ಸಾಹಿತ್ಯಪ್ರಿಯರು   ತಮ್ಮ ಮಿತ ಜ್ಞಾನದ  ಓದಿ ನಿಂದ ಸಾಹಿತ್ಯವನ್ನು  ಅರ್ಥೈಸಿಕೊಂಡ ರೀತಿಗಿಂತಲೂ  ಮಿಗಿಲಾದ ವಿಸ್ತಾರ ಅದಕ್ಕಿದೆ  , ಅದನ್ನು ರಸವತ್ತಾಗಿ  ಅರ್ಥೈಸಿ, ವಿಸ್ತರಿಸಿ  ಸವಿವರವಾಗಿ  ಹೇಳುವವನೊಬ್ಬ  ಬೇಕಾಗಿತ್ತು ಎಂದು ಅನ್ನಿಸಿದಾಗಲೆಲ್ಲಾ  ನಮ್ಮ ಕಣ್ಣಿಗೆ ಮೊದಲು ಕಾಣುವ  ವ್ಯಕ್ತಿ ಎಂದರೆ   ಚಾಮರಾಜ ನಗರದ  ಎಳ್ಳಂದೂರು  ವರಾಹಮೂರ್ತಿ  ಗುಂಡೂರಾವ್,   ಅರ್ಥಾತ್     Y  V ಗುಂಡೂರಾವ್  ಅವರು . 

ವಾಣಿಜ್ಯ ವಿಭಾಗದಲ್ಲಿ  ಪದವಿ ಪಡೆದು  ರಿಸೆರ್ವೆ ಬ್ಯಾಂಕ್ ಉದ್ಯೋಗಿಯಾಗಿ  ನಂತರ ಕಾನೂನು ಪದವಿ  ಮತ್ತು  ಡಿಪ್ಲಮೋ ಇನ್ ಇಂಗ್ಲಿಷ್  ಕೋರ್ಸ್ ಮುಗಿಸಿ  ತದ ನಂತರದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಂದರೆ ನಬಾರ್ಡ್ ನಲ್ಲಿ  ಅಧಿಕಾರಿಯಾಗಿ  ಸೇವೆಸಲ್ಲಿಸಿದ  ಶ್ರೀಯುತ  YVG  ಯವರು   ವೃತ್ತಿ ಜೀವನದಲ್ಲೇ ಸಾಹಿತ್ಯದ ಆಸಕ್ತಿ  ಬೆಳೆಸಿಕೊಂಡವರು.  .ಯುವ ವಯಸ್ಸಿನಲ್ಲಿ  ನಾ ಕಸ್ತೂರಿ , ಬೀಚಿ  , ಕೈಲಾಸಂ  ಮತ್ತು ನಂತರದಲ್ಲಿ  ವೈ  ಏನ್ ಕೆ  ಅವರ ಬರಹಗಳಿಂದ  ಪ್ರಭಾವಿತರಾದ  ಗುಂಡೂರಾಯರ ಮಾತುಗಳನ್ನು  ಕೇಳುತ್ತಿದ್ದರೆ  ಇವರ ವ್ಯಕ್ತಿತ್ವ  ಈ ನಾಲ್ಕೂ ಸಾಹಿತಿಗಳ  ಸಮ್ಮಿಳಿತದ  ರಸಪಾಕ  ಅನ್ನುವ  ಅರಿವು ಪ್ರತಿಯೊಬ್ಬ  ಸಾಹಿತ್ಯ ಆಸಕ್ತನಿಗೂ  ಅನುಭವಕ್ಕೆ ಬರುತ್ತದೆ  ಅನ್ನುವುದು ನಮ್ಮ ಬಲವಾದ ವಿಶ್ವಾಸ .

 Humour is not a joke  ಎಂದು  ಗಂಭೀರವಾಗಿಯೇ  ಮಾತಿಗಾರಂಭಿಸುವ  YVG  ಎಂತಹ  ಗಂಭೀರ ಸನ್ನಿವೇಶದಲ್ಲೂ  ನವಿರಾಗಿ ನಗು ಉಕ್ಕಿಸುವಲ್ಲಿ  ನಿಸ್ಸೀಮರು . ಟಿ. ಪಿ . ಕೈಲಾಸಂ ಅವರ ನಾಟಕಗಳಲ್ಲಿ  ಅಭಿನಯಿಸಿ ವಿಶಿಷ್ಟ ಶೈಲಿಯ ಉದ್ದುದ್ದ  ಸಂಭಾಷಣೆಗಳನ್ನು  ಮೂಲ ರೂಪಕ್ಕೆ  ಒಂದಿನಿತೂ ಕುಂದಾಗದಂತೆ  ಪ್ರೇಕ್ಷಕರೆದುರಲ್ಲಿ  ಲವಲವಿಕೆಯಿಂದ ಒಪ್ಪಿಸುವಲ್ಲಿ  ಇವರು ಎತ್ತಿದ ಕೈ. 
ಅಪರಿಮಿತ ಸಂಗೀತದ  ರಾಗ ಜ್ಞಾನದ ಜೊತೆಗೆ   ಹಾಡುಗಾರಿಕೆಯನ್ನೂ ಕರಗತ ಮಾಡಿಕೊಂಡಿರುವ ಗುಂಡೂರಾಯರು  ತಾನೇ ಸಾಹಿತ್ಯ ಬರೆದು  ಹಾಡಿದ ಅಣಕು ಹಾಡುಗಳನ್ನು ಕೇಳುವುದೇ  ಒಂದು ಸೊಗಸು . ಇಂತಹ  ಪ್ರತ್ಯುತ್ಪನ್ನ ಮತಿ  ವಾಗ್ಮಿ   ಈ ಶುಭ ಸಂಜೆಯಲ್ಲಿ  ಮೈಸೂರಿನ  ಗುಂಡ್ಲುಪೇಟೆಯ  ಗುಂಡು ಪಂಡಿತರೆಂದೇ ಖ್ಯಾತರಾದ ಜಿ ಪಿ ರಾಜರತ್ನಮ್  ಅವರು ಮುನಿಯನ ಹೆಂಡದ ಬುಂಡೆಯೊಳಗೆ  ತನ್ನ ಸರಳಾತಿ ಸರಳ  ಹಳ್ಳಿ ಭಾಷೆಯಲ್ಲಿ ಜೀವನಾರ್ಥದ  ಸೊಭಗನ್ನು  ಹ್ಯಾಗೆ  ತುಂಬಿಸಿದರೆನ್ನುವುದನ್ನು ನಮ್ಮನಿಮ್ಮೆದುರಿಗೆ ಬೆಳದಿಂಗಳ ರಾತ್ರೀಲಿ ಈಚ್ಲೆಂಡ  ಚೆಲ್ಲಿದಷ್ಟೇ  ಸೊಗಸಾಗಿ ವಿಸ್ತರಿಸಲಿದ್ದಾರೆ . 


ಬನ್ನಿ  ಅವರ ಅದ್ಭುತ ಮಾತುಗಳಿಗೆ ಕಿವಿಯಾಗೋಣ . ಅವರ ಮಾತಿನ ಮೂಲಕ ಮುನಿಯನ ಪಡ್ಕಾನೆಯಲ್ಲಿ  ಆಧ್ಯಾತ್ಮ  ಹರಿಯಬಿಟ್ಟ  ಮೆಚ್ಚಿನ ಕವಿ  ಜಿ ಪಿ ರಾಜರತ್ನಮ್ ಅವರ ಕಾವ್ಯದ ಸೊಭಗನ್ನು,   ಹೊಟ್ಟೆ ತುಂಬಾ ತುಂಬ್ಕೊಂಡು ಈ  ಮೈಯ್ನಾ ಭೂಮಿಯುದ್ಕ್ಕೂ ಬಗ್ಗಿಸ್ಕ್ಕೊಂಡು  ಅದ್ಭುತ  ಕವಿಗೊಮ್ಮೆ  ಈ ಸಂದಿಗ್ಧ ಕಾಲದಲ್ಲಿ ಕಾಕತಾಳೀಯವೆಂಬಂತೆ ಆಲ್ಕೋಹಾಲ್  ಸ್ಯಾನಿಟೈಜ್ಡ್ ಕೈಗಳಿಂದ ಆರೋಗ್ಯಪೂರ್ಣವಾಗಿ ,   ಅಭಿಮಾನದಿಂದ ನಮಿಸೋಣ .  











Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.