kumaraswamy

ಮಾನ್ಯ ಹೆಚ್. ಡಿ.ಕುಮಾರ ಸ್ವಾಮಿಯವರು
 ಮುಖ್ಯಮಂತ್ರಿಗಳು
 ಕರ್ನಾಟಕ ಸರ್ಕಾರ.

ಮಾನ್ಯರೇ.

ತಾವು ತಿಳಿದಿರುವಂತೆ ತುಳು ಭಾಷೆ ಸುಮಾರು ಎರಡುಸಾವಿರ ವರ್ಷಗಳ ಹಳೆಯ ಇತಿಹಾಸವಿರುವ ಪಂಚ ದ್ರಾವಿಡ ಭಾಷೆಗಳಾದ ಕನ್ನಡ ತಮಿಳು ತೆಲುಗು ಮತ್ತು ಮಲಯಾಳಂ ಜತೆ ಸಮಾನ ಸ್ಥಾನ ಹಂಚಿಕೊಂಡ ಭಾಷೆ.  ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋದುದರಿಂದ
ಇಂದು ಅಪಾರ ಸಾಂಸ್ಕೃತಿಕ ವೈಭವದ ತುಳು ಭಾಷೆ  ವಿಶ್ವಸಂಸ್ಥೆಯ ವರದಿಯ ಪ್ರಕಾರ ಅವನತಿಯ ಅಂಚಿನಲ್ಲಿರುವ ಭಾಷೆ.
ತುಳುನಾಡು ಸಾಂಸ್ಕೃತಿಕವಾಗಿ ತನ್ನದೇ ಸೊಗಡನ್ನು ಮೈಗೂಡಿಸಿಕೊಂಡಿದ್ದರಿಂದ ಇಂದಿಗೂ ಜರ್ಮನಿ,ಫ್ರಾನ್ಸ್ ಮತ್ತು ಅಮೇರಿಕಾದಂತಹ ದೇಶಗಳ ವಿದ್ವಾಂಸರಿಗೆ ತುಳು ಭಾಷೆ ಸಂಶೋಧನೆಯ ಆಕರವಾಗಿರುವುದು ನಿತ್ಯ ಸತ್ಯ.
ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಬಹುಭಾಗ ಕರ್ನಾಟಕದಲ್ಲಿ ಸೇರಿಕೊಂಡುದರಿಂದ ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಸಾಕಷ್ಟು ಕೊಡುಗೆಗಳನ್ನು ಸಾಂಸ್ಕೃತಿಕ ವಾಗಿ,ಮತ್ತು ಸಾಹಿತ್ಯಿಕವಾಗಿ ಕೊಡುತ್ತಾ ಬಂದವರು ತುಳುವರು. ಕರ್ನಾಟಕ ಸರಕಾರ ಕೂಡ ಆಗಾಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಗಳನ್ನು ಸ್ಥಾಪಿಸಿದೆಯಾದರೂ ಕೆಲವಾರು ನಿಯಮಾತ್ಮಕ ಮಿತಿಗಳಿಂದ ಅವುಗಳು ತಮ್ಮ ಸಾಮರ್ಥ್ಯಕ್ಕೆ  ತಕ್ಕ ಕೆಲಸ ಮಾಡುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿವೆ.
ಮೊದಲನೆಯದಾಗಿ ತುಳು ಭಾಷೆ ಎಂಟನೇ ಪರಿಚ್ಛೇದ ಕ್ಕೆ ಸೇರ್ಪಡೆಯಾಗದೇ ಇರುವುದರಿಂದ  ಸಾಹಿತ್ಯಿಕವಾಗಿ ಹೆಚ್ಚಿನ ಅನುದಾನಗಳು ಮತ್ತು ಉತ್ಕೃಷ್ಟ ಪ್ರಶಸ್ತಿಗಳನ್ನು ಪಡೆಯುವುದಕ್ಕೆ ಅರ್ಹತೆ ಹೊಂದುವುದಿಲ್ಲ.
ಇದರಿಂದಾಗಿ ಈ ಪ್ರದೇಶದಲ್ಲಿ ಉತ್ತಮ ಸಾಹಿತ್ಯ ಹಿನ್ನಲೆಯಿದ್ದರೂ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹಗಳು ಸಿಗುತ್ತಿಲ್ಲ.
ಹಾಗಾಗಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕಾದ ಅಡೆತಡೆಗಳ ಬಗ್ಗೆ ‌ಮಾಹಿತಿ ಪಡೆದು ಅವನ್ನು ಸರಿಪಡಿಸಿ ಕೇಂದ್ರ ಸರ್ಕಾರಕ್ಕೆ  ಒತ್ತಡ ಹೇರುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು ಎನ್ನುವುದು ಸರ್ವ ತುಳುವರ ಆಶಯ .
ತುಳುಭಾಷೆ ಮಾತನಾಡುವ ಜನರ ನಡುವೆ ಅಪರಿಮಿತ ಸಾಂಸ್ಕೃತಿಕ,ಜಾನಪದ ಸಂಪತ್ತು
ಆಚರಣೆಗಳು ಚಾಲ್ತಿಯಲ್ಲಿದ್ದು ಅದು ಕರ್ನಾಟಕಕ್ಕೆ ಜಗತ್ತಿನಲ್ಲಿ ವೈವಿಧ್ಯಮಯ ಸ್ಥಾನವನ್ನು  ಕಲ್ಪಿಸುವ ಸಾಧ್ಯತೆ ಇರುವುದರಿಂದ ಈ ಸಂಸ್ಕೃತಿಯ ಸಂಪನ್ನತೆಯ ಉಳಿವು ಇಂದಿನ ಅಗತ್ಯ.  ಹಲವಾರು ಬುಡಕಟ್ಟು ಸಮುದಾಯಗಳ ಮೂಲ ಕಲೆಗಳು ಈಗಾಗಲೇ  ನಾಶವಾಗಿ ಹೋಗಿವೆ .  

ಹಾಗಾಗಿ ಭಾರತದಲ್ಲಿ  ಇತರ ಹದಿನಾರಕ್ಕಿಂತಲೂ ಅಧಿಕ ರಾಜ್ಯಗಳು, ಹೆಚ್ಚಾಗಿ ಈಶಾನ್ಯದ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಅನುಸರಿಸಿದಂತೆ  ತುಳುವನ್ನು ಕೂಡಾ ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿ  ಈ ಜಾನಪದ ಸಂಪನ್ನತೆಯ  ಉಳಿವಿಗೆ ಸಹಕಾರಿಯಾಗಬೇಕು .
ಸಿಕ್ಕಿಂ ಮತ್ತು ಪಶ್ಚಿಮ ಬಂಗಾಲಗಳು ಹತ್ತಕ್ಕೂ ಅಧಿಕ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಘೋಷಿಸಿದ ನಿದರ್ಶನಗಳು ಭಾರತದಲ್ಲಿವೆ.ಇವೆಲ್ಲಾ ಆಯಾ ಭಾಷೆಗಳ ಸಾಂಸ್ಕೃತಿಕ ಸಂಪತ್ತನ್ನು ಉಳಿಸುವ ಯೋಚನೆಯೊಂದಿಗೆ ಅಧಿಕೃತಗೊಂಡ ಭಾಷೆಗಳು.
ತುಳುವಿನ ಉಳಿವಿಗಾಗಿ ತುಳು ಅಭಿವೃದ್ಧಿ ಪ್ರಾಧಿಕಾರ ಮತ್ತು ತುಳು ಯೂನಿವರ್ಸಿಟಿಯನ್ನು ತೆರೆಯ ಬೇಕೆನ್ನುವುದು ಕೂಡಾ ಭಾಷೆಯ ಹಿತದೃಷ್ಟಿಯಿಂದ ಅತಿ ಅಗತ್ಯ ನಿರ್ಣಯಗಳು. ತನ್ನ ಮಡಿಲಲ್ಲಿ  ಸುಮಾರು ಹದಿನೆಂಟು ಉಪಭಾಷೆಗಳನ್ನು  ಬೆಳೆಸಿಕೊಂಡು ಅವುಗಳ ಸಂಸ್ಕೃತಿಯನ್ನು ತನ್ನೊಡಲಲ್ಲಿ ಪಾಲಿಸಿಕೊಂಡು ಬರುತ್ತಿರುವ  ಮತ್ತು ಆಮೂಲಕ ಕರ್ನಾಟಕದ ಮತ್ತು ಕನ್ನಡದ ಹಿರಿಮೆಯ ಔನತ್ಯಕ್ಕೆ ಕಾರಣವಾಗುವ  ತುಳುಭಾಷೆಯ ಅಭಿವೃದ್ಧಿಗೆ ಈ ಬೇಡಿಕೆಗಳು  ನ್ಯಾಯಯುತವೇ ಆಗಿವೆ  .
ತಾವು ಮೇಲಿನ ಎಲ್ಲಾ ಅಂಶಗಳನ್ನು ಮನದಟ್ಟು ಮಾಡಿಕೊಂಡು ತುಳು ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮತ್ತು ಉಳಿಸುವಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡು ತುಳುಭಾಷಿಕರ ಮೆಚ್ಚುಗೆ ಮತ್ತು ಪ್ರೀತಿಗೆ ಪಾತ್ರರಾಗಬೇಕೆಂದು  ನಿಮ್ಮಲ್ಲಿ ವಿನಮ್ರ ವಿನಂತಿ .
ತುಳು ಭಾಷೆಯ  ಶ್ರೇಯೋಭಿವೃದ್ಧಿಗೆ ಈ ನಾಡಿನ ದೊರೆಯಾಗಿ ನಿಮ್ಮ ಸ್ಮರಣೀಯ ಕೊಡುಗೆಗಳ   ನಿರೀಕ್ಷೆಯಲ್ಲಿರುವ  

ತುಳು ಎಂಟನೇ ಪರಿಚ್ಛೇಧ  ಹೋರಾಟ ಸಮಿತಿ
ಬೆಂಗಳೂರು 

Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.