ಎಲ್ಲಾ ಮಾಧ್ಯಮ ಪ್ರತಿನಿಧಿ ಸ್ನೇಹಿತರಿಗೆ


೨೧-೧೨-೨೦೧೮

ಸಂಪಾದಕರು/ ಸುದ್ದಿ ಸಂಪಾದಕರು..
ಎಲ್ಲಾ ಮಾಧ್ಯಮ  ಪ್ರತಿನಿಧಿ ಸ್ನೇಹಿತರಿಗೆ

ಪ್ರಕಟಣೆಯ ಕೃಪೆಗಾಗಿ.

ವಿಷಯ: ತುಳು  ಭಾಷೆ  ಎಂಟನೇ ಪರಿಚ್ಛೇದಕ್ಕೆ  ಸೇರ್ಪಡೆಗೊಳ್ಳುವುದರ  ಹಿನ್ನಡೆಯ ಬಗ್ಗೆ

ಸನ್ಮಾನ್ಯರೇ,

ತಮಗೆಲ್ಲ ತಿಳಿದಂತೆ ತುಳು  ಭಾಷೆ  ಕರ್ನಾಟಕದ  ದಕ್ಷಿಣ ಕನ್ನಡ , ಉಡುಪಿ , ಕಾಸರಗೋಡು, ಮೂಡಿಗೆರೆ  ಮತ್ತು ಕುಂದಾಪುರದ ಕೆಲವು ಕಡೆ ಸ್ಥಳೀಯ ಆಡು ಭಾಷೆಯಾಗಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂದು  ಗುರುತಿಸಲ್ಪಟ್ಟ ಅತ್ಯಂತ ಹಳೆಯ ಮತ್ತು ಸಮೃದ್ಧ ಭಾಷೆಯಾದರೂ ಕರ್ನಾಟಕದಲ್ಲಿ ಉಪಭಾಷೆಯೆಂದು ಕರೆಯಲ್ಪಡುತ್ತಿದೆ  . ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ  ಕರ್ನಾಟಕದಲ್ಲಿ  ಏಕೀಕರಣಗೊಂಡ ನಂತರ  ತುಳು ಭಾಷೆಗೆ  ಸರಿಯಾದ ಸ್ಥಾನಮಾನಗಳು  ದೊರಕದೆ ಅದು ಸೊರಗುತ್ತಾ ಹೋಯಿತು . ಒಂದು ಅಂದಾಜಿನ ಪ್ರಕಾರ  ಹೊರನಾಡು ಮುಂಬೈ ನಗರ ಒoದರಲ್ಲೇ ಮೂವತ್ತು ಲಕ್ಷ  ಮತ್ತು  ಬೆಂಗಳೂರಲ್ಲಿ ಹತ್ತು ಲಕ್ಷ  ತುಳು ಭಾಷಿಕರು  ಇದ್ದಾರೆ  ಮತ್ತು ವಿಶ್ವದಾದ್ಯಂತ  ಸುಮಾರು ಒಂದೂವರೆ ಕೋಟಿಯಷ್ಟು ಜನರು ಈ  ಭಾಷೆಯನ್ನು  ಬಲ್ಲವರಾಗಿರುವುದು ಈ ಭಾಷೆಯ ಜನಪ್ರೀಯತೆಗೆ ಸಾಕ್ಷಿ. ಸಾಹಿತ್ಯಿಕವಾಗಿಯೂ  ವಿಶೇಷ ಜಾನಪದ ಕಣಜವಾಗಿರುವ  ಈ ಭಾಷೆಯ ಕುರಿತು ಪೀಟರ್ ಜೆ ಕ್ಲಾಸ್, ಲೌರಿ ಹಾಂಕೊ  ಇಂತಹ ಅನೇಕ   ವಿದೇಶಿಯ ಸಂಶೋಧಕರು  ಆಕರ್ಷಿತರಾಗಿ ಕೇವಲ ಕೆಲವು ದಶಕಗಳ ಹಿಂದೆ ಉಡುಪಿಯಲ್ಲಿ ಸಾಕಷ್ಟು ಸಂಶೋಧನೆಗಳನ್ನು  ಮಾಡಿದ್ದಾರೆ.ಕನ್ನಡಕ್ಕೆ ಕಿಟ್ಟೆಲ್ ಶಬ್ದಕೋಶ(೧೮೮೯) ಕೊಡುವ ಮೊದಲೇ ರೆವೆರೆಂಡ್ ಮ್ಯಾನರ್  ಅವರು ತುಳುವಿಗೆ ಎರಡು  ಸಂಪುಟಗಳಲ್ಲಿ  ಶಬ್ದಕೋಶಗಳನ್ನು  ಕೊಟ್ಟಿರುತ್ತಾರೆ( ೧೮೮೬ ಮತ್ತು ೧೮೮೮). ಇಷ್ಟಿದ್ದೂ  ಯುನೆಸ್ಕೋ ವರದಿಯಂತೆ ರಾಜಾಶ್ರಯ-ರಾಜ್ಯಾಶ್ರಯ  ಇಲ್ಲದೆ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿರುವ ಈ ಸುಂದರ ಭಾಷೆಯ  ಅಸ್ತಿತ್ವದ ಉಳಿವಿಗಾಗಿ ಇಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು   ವಿಷಾದನೀಯ .

ರಾಜ್ಯ ಸರ್ಕಾರದಲ್ಲಿ  ಈ ಭಾಷೆಗೆ  ಅಧಿಕೃತ ಮಾನ್ಯತೆ ಕೊಟ್ಟು  ಈ ಬಾಷೆಯನ್ನು ಬೆಳೆಸಿ  ಮತ್ತು ಕೇಂದ್ರ ಸರಕಾರ ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ  ಸೇರಿಸಿ  ಭಾಷಾ ಸಾಹಿತ್ಯ ಮಾನ್ಯತೆಯ ಬೆಳವಣಿಗೆಗೆ ಸಹಕರಿಸಿ ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿಕೊಂಡು     ಸಂಬಂಧ ಪಟ್ಟ ರಾಜ್ಯದ ಜನ ಪ್ರತಿನಿಧಿಗಳನ್ನು  ಒತ್ತಾಯಿಸಲು ತುಳು ಎಂಟನೇ ಪರಿಚ್ಚೇದ ಹೋರಾಟ ಸಮಿತಿಯು   ರಾಜ್ಯದ ಮತ್ತು ದೇಶದ -ವಿದೇಶದ ಎಲ್ಲ ತುಳು ಸಂಘಟನೆಗಳು, ಸಂಘ ಸಂಸ್ಥೆಗಳ ಬೆಂಬಲದೊಂದಿಗೆ  ವಿನೂತನ ರೀತಿಯ  ''ಪೋಸ್ಟ್ ಕಾರ್ಡ್ ಚಳುವಳಿ''  ಅಭಿಯಾನಕ್ಕೆ  ಸಿದ್ಧತೆ ನಡೆಸಿದೆ.

ಹೊಸ ವರ್ಷದ (೨೦೧೯)  ಜನವರಿ ತಿಂಗಳಿಡೀ ಎಲ್ಲ ಜನಪ್ರತಿನಿಧಿಗಳಿಗೆ ಪೋಸ್ಟ್ ಕಾರ್ಡ್ ನಲ್ಲಿ  ಅವರ ಮನೆ ವಿಳಾಸಕ್ಕೆ ಮತ್ತು ಕಾರ್ಯಾಲಯಕ್ಕೆ  ''ತುಳು  ಭಾಷೆಯನ್ನು  ಎಂಟನೇ ಪರಿಚ್ಚೇದಕ್ಕೆ ಸೇರಿಸಿ ಮತ್ತು ತುಳು ಭಾಷೆಯನ್ನು ಉಳಿಸಿ''  ಎಂದು ಬರೆದು ಅವರಲ್ಲಿ ಜಾಗ್ರತಿ ಮೂಡಿಸಲು  ಮತ್ತು ಸಹಕರಿಸಲು ಒತ್ತಾಯಿಸಲಾಗುವುದು .  ಮುಂದಿನ ಚುನಾವಣೆಯ ಸಮಯದಲ್ಲಿ ತುಳು ಮತದಾರರನ್ನು ಈ ಬಗ್ಗೆ ಜಾಗ್ರತಗೊಳಿಸಲಾಗುವುದು.

ಜೊತೆಗೆ ಇತ್ತೀಚಿಗೆ ಈ ತಿಂಗಳ 12ರಂದು ತುಳು ಭಾಷೆಯ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ  ಕಾಸರಗೋಡಿನ ಕೇರಳ ಸರಕಾರದ  ಸಂಸದ  ಪಿ. ಕರುಣಾಕರನ್ ಅವರಿಗೆ ಧನ್ಯವಾದ ಸಮರ್ಪಿಸಿ ಅವರನ್ನು ಮತ್ತಷ್ಟು ಈ  ವಿಷಯದಲ್ಲಿ ಹೋರಾಡಲು ಹುರಿದುಂಬಿಸಲು ಪ್ರಯತ್ನಿಸಲಾಗುವುದು.


ಒಟ್ಟು ಬೇಡಿಕೆಗಳು:
  • ತುಳು ೮ನೇ ಪರಿಚ್ಛೇಧಕ್ಕೆ  ಸೇರಬೇಕು
  • ಕಲಿಕೆಯ ಭಾಷೆಯನ್ನಾಗಿ  ಮಾನ್ಯ ಮಾಡಿರುವ  ತುಳುವನ್ನು ಸರಕಾರ  ವ್ಯವಹಾರ ಬಾಷೆ ಗಳಲ್ಲೂ  ರಾಜ್ಯದ ಅಧಿಕೃತ ಭಾ ಷೆ  ಎಂದು ಘೋಷಿಸ   ಬೇಕು
  • ಕನ್ನಡದಂತೆಯೇ ತುಳುವಿಗೂ  ಒಂದು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು 
  • ತುಳು ಯೂನಿವೆರ್ಸಿಟಿಯ ರಚನೆಯಾಗಬೇಕು 
  • ತೌಳವ ಸಾಂಸ್ಕೃತಿಕ , ಪ್ರಾಚೀನ ಮಧ್ಯ ಮತ್ತು ಸಮಕಾಲೀನ  ಸಾಹಿತ್ಯ, ಐತಿಹಾಸಿಕ  ಸ್ಥಳಗಳ  ಗುರುತಿಸುವಿಕೆ  ಮತ್ತು ಸಂರಕ್ಷಣೆ 
  • ತುಳು ಲಿಪಿ ಅಭಿವೃದ್ಧಿಗೆ ಪ್ರೋತ್ಸಾಹ  ಮತ್ತು ಪ್ರಾಚೀನ ಗ್ರಂಥಗಳನ್ನು   (ತಾಳೆ ಒಲಿ )ಬೆಳಕಿಗೆ ತರುವ ಮತ್ತು ಸಂರಕ್ಷಣೆ ಕಾರ್ಯ     
ನಮ್ಮ ಈ ಪ್ರಯತ್ನಕ್ಕೆ  ಎಲ್ಲಾ ಮಾಧ್ಯಮ  ಬಂಧುಗಳು ಅತಿ ಹೆಚ್ಚಿನ ಪ್ರಚಾರ ಕೊಟ್ಟು ನಮ್ಮ ಈ ಬೇಡಿಕೆ ಎರಡೂ  ಸರಕಾರಗಳಿಗೆ ಮತ್ತು ಎಲ್ಲ ಜನಪ್ರತಿನಿಧಿಗಳಿಗೆ ತಲುಪುವಂತೆ ಸಹಕರಿಸಬೇಕಾಗಿ ಈ ಮೂಲಕ ಕೋರಿಕೊಳ್ಳುತ್ತೇವೆ


 ತುಳು ಎಂಟನೇ ಪರಿಚ್ಛೇದ ಹೋರಾಟ ಸಮಿತಿ
-ಅಲೋಕ್ ರೈ
-ಡಾ.ಉದಯ ಧರ್ಮಸ್ಥಳ
-ಪುರುಷೋತ್ತಮ ಚೆಂಡ್ಲಾ
-ಸತೀಶ್ ಅಗ್ಪಾಲ
-ಪಳ್ಳಿ ವಿಶ್ವನಾಥ್ ಶೆಟ್ಟಿ
-ಶಾಂತಾರಾಮ್ ವಿ.ಶೆಟ್ಟಿ

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.