ವಿಜಯನಾರಸಿಂಹ



ಬೆನಕನ ಜೊತೆ ಇವರನ್ನೂ ನೆನೆಯೋಣ ಕೊನೆ ತನಕ.


ಹಾಡುಗಳು  ಕಾಡುವುದು  ಅದಕ್ಕೆ  ಅಂಟಿಕೊಂಡಂತಹ  ನಮ್ಮ  ಹಲವು ಹಳೆಯ ನೆನಪುಗಳ ಕಾರಣದಿಂದ .... 


ಆಟಿ ಅಥವಾ ಆಷಾಡ ತಿಂಗಳ ಕಷ್ಟ - ಕಾಯಿಲೆ , ಮತ್ತು ಕಡು ಜಡತ್ವದಿಂದ  ಹೊರಬರಬೇಕಾದರೆ  ಶ್ರಾವಣದ  ಸೊಬಗು ನಿಮ್ಮ ಮನದಂಗಳದಲ್ಲಿ ನಲಿಯೋವರೆಗೆ ಕಾಯಬೇಕು. ಬೇಂದ್ರೆಯವರಂದಂತೆ ಶ್ರಾವಣ ಬರುವ ದಾರಿಯಲ್ಲೆಲ್ಲಾ ಅನಿಯಮಿತ ನಗುವು ,ನಲಿವು.

ಶ್ರಾವಣದಲ್ಲಿ ಅನಾಯಾಸವಾಗಿ  ನೆನಪಾಗುವ ಮತ್ತೊಂದು ಹೆಸರೇ  ವಿಜಯನಾರಸಿಂಹ ಅವರದು. ಅದಕ್ಕೆ ಒಂದು ಬಲವಾದ ಕಾರಣವೂ ಇದೆ.

ಹಳ್ಳಿಯ  ಪರಿಸರದಲ್ಲಿ   ಜಡಿಮಳೆಯ  ಕೊಚ್ಚೆಯಲ್ಲಿ  ಕಿಚಿಗುಟ್ಟಿ ಮುದುಡಿದ ಮನಸ್ಸಿಗೆ  ದೂರದ  ಬೆಟ್ಟದ  ದೇವರ ಗುಡಿಯಿಂದಲೋ ,ಸಿನಿಮಾ ಟೆಂಟಿಂದಲೋ ಅಥವಾ  ಮಂಗಳ ಕಾರ್ಯಕ್ಕೆ ಅಣಿಯಾದ ಅಕ್ಕ ಪಕ್ಕದ ಮನೆಯಿಂದಲೋ ಮುದಕೊಡುವ ಶ್ರಾವಣದ ಮೊದಲ  ಹಾಡೋ ಎಂಬಂತೆ  ಹಾಡೊಂದು  ಮಂದ  ಶೀತ  ಮಾರುತದ ತಂಪಿನೊಂದಿಗೆ  ಕಿವಿಯ ಪಕ್ಕ ತೇಲಿ ಹೋಗುತ್ತದೆ.  

ಪಿ ಬಿ ಶ್ರೀನಿವಾಸ್  ಅವರ   ಮಧುರ ಧ್ವನಿಯ ಹಾಡದು

ಶರಣು ಶರಣಯ್ಯ  ಶರಣು ಬೆನಕ...

"ಕಾಡುವುದು ಕಾವ್ಯ" ಇದು  ಕವಿ ಶ್ರೇಷ್ಠ ಸುಬ್ರಾಯ ಚೊಕ್ಕಾಡಿಯವರು ಕಾವ್ಯಕ್ಕೆ  ಕೊಡುವ  ಅತಿ ಚಿಕ್ಕ ಮತ್ತು ಅತಿ ಚೊಕ್ಕ ವ್ಯಾಖ್ಯಾನ. ಸುಮಾರು ನಲವತ್ತು ವರ್ಷಗಳ  ಸುಧೀರ್ಘ ಅವಧಿಯ ನಂತರವೂ ಇವತ್ತಿಗೂ ಒಂದು ಶುಭಕಾರ್ಯ ಈ ಹಾಡಿನಿಂದಲೇ ಆರಂಭವಾಗಬೇಕು ಎಂದು ಸನ್ಮನಗಳು ಬಯಸುವುದಾದರೆ ಆ ಹಾಡಿಗೆ ಅದೆಂತಹ ಸೆಳೆತವಿರಬಹುದು ನೀವೇ ಹೇಳಿ?.

ವಿಜಯನಾರಸಿಂಹ  "ಬಾದ್ರಪದ ಶುಕ್ಲ ಚೌತಿ" ಧ್ವನಿ ಸುರುಳಿಗೆ ಬರೆದ ಗಜಮುಖನೆ ಗಣಪತಿಯೇ ನಿನಗೆ ವಂದನೆ,ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ, ನಂದಗೋಕುಲವಾಯಿತು ಉಡುಪಿಯಿದು  ಹೀಗೆ ಎಲ್ಲಾ ಹಾಡುಗಳೂ ನಮ್ಮನ್ನು ಇವತ್ತಿಗೂ ಭಕ್ತಿಭಾವದೊಳಗೆ ಮುಳುಗಿಸಿ ಆಧ್ಯಾತ್ಮಲೋಕದೊಳಗೆ ತೇಲಾಡಿಸುತ್ತವೆ.ಎಲ್ಲರ ನಾಲಗೆಯೊಳಗೆ ನಲಿದಾಡಿದ ಈ ಹಾಡಿನ ಜನಕ ವಿಜಯನಾರಸಿಂಹ ಎನ್ನುವುದು ಲೋಕ ಮರೆತ ಸತ್ಯ

ಮಂಡ್ಯದ  ಪಾಂಡವಪುರ ತಾಲೂಕಿನ ಹಳೇಬೀಡು  ಹಳ್ಳಿಯಲ್ಲಿ  16 ಜನವರಿ 1927 ಜನಿಸಿದ ವಿಜಯನಾರಸಿಂಹ "ಓಹಿಲೇಶ್ವರ* ಚಿತ್ರದ ತನ್ನ ಮೊದಲ  ''ಈ ದೇಹದಿಂದ ದೂರವಾದೆಯೇಕೆ ಆತ್ಮನೆ?''  ಹಾಡಿನಿಂದಲೇ ಸಿನಿಮಾ ಹಾಡುಗಳಲ್ಲಿಯೂ ಕಾವ್ಯ ಮತ್ತು ಆಧ್ಯಾತ್ಮದ ಸಿಹಿಲೇಪನ ಉಣಬಡಿಸಿದವರು. ಅಡಿಗರು ಮತ್ತು ಪುತಿನ ಅವರ ಒಡನಾಟದ ಸಾಹಿತಿಯಾಗಿ ಬೆಳೆದ ವಿಜಯನಾರಸಿಂಹ ಮುಂದಕ್ಕೆ ಜಿ.ಕೆ ವೆಂಕಟೇಶ್ ಅವರ ಒಲವಿನ  ಗೀತ ರಚನೆಕಾರರಾಗಿ  ವಸಂತ ಬರೆದನು ಒಲವಿನ ಓಲೆ,ಈ ಸಂಭಾಷಣೆ ಈ ಪ್ರೇಮ ಸಂಭಾಷಣೆ , ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ ಮಂದಾರ ಪುಷ್ಪವು ನೀನು, ನೀನೇ ಸಾಕಿದಾ ಗಿಣಿ,ವಿರಹ ನೂರು ನೂರು ತರಹ ಇಂತಹ ಅಮರ ಅದ್ಭುತ ರಚನೆಗಳನ್ನು ಆಳವಾಗಿ ಸಂಗೀತ ಪ್ರಿಯರ ಹೃದಯಕ್ಕೆ ನೇರವಾಗಿ ಇಳಿಸಿದವರು. 

ಅಮೃತಘಳಿಗೆ ಯ ಹಿಂದೂಸ್ಥಾನವು ಎಂದೂ ಮರೆಯದ ಹಾಡಿನ ಮೂಲಕ ದೇಶಭಕ್ತರ ಧಮನಿ ಧಮನಿಯೊಳಗೆ ಬಿಸಿರಕ್ತವನ್ನು ಸರಾಗವಾಗಿ ನುಗ್ಗಿಸಿದವರು.

ಡಾ. ರಾಜ್ ಅಭಿನಯದ ಒಡಹುಟ್ಟಿದವರು ಚಿತ್ರದ ಜನಕನ ಮಾತಾ...  ಹಾಡಿನೊಂದಿಗೆ ತನ್ನ ಸುಧೀರ್ಘ 4000 ಹಾಡುಗಳ ಸಂಗೀತ ಪಯಣ ಮುಗಿಸಿದ ವಿಜಯನಾರಸಿಂಹ     ಬದುಕಿನ ಬೈರಾಗಿ ಮತ್ತು ಶ್ರೀಮಾನ್ ಚಕ್ರಾಯಣ ದಂತಹ ಉತ್ತಮ ಕಾಬರಿಗಳನ್ನೂ , ಪುಟ್ಟಣ್ಣ ಕಣಗಾಲ್ ಅವರ ಆತ್ಮ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಕೊಟ್ಟಿದ್ದರು ಅನ್ನೋದು  ಕೆಲವರಿಗೆ ಬಿಟ್ಟು ಹಲವರಿಗೆ ಗೊತ್ತಿರದ ಸಂಗತಿ. 

ಬಡ ಸಾಹಿತಿ ಪದಕ್ಕೆ ಅರ್ಥ ತುಂಬಲು ಹೆಣಗಾಡಿದ ಸಾಹಿತಿಗಳ ಪಟ್ಟಿಗೆ ವಿಜಯನಾರಸಿಂಹರಂತಹ ಸದಭಿರುಚಿಯ,ರಚನಾತ್ಮಕ ಸಾಹಿತಿಯೂ ಸೇರಿದ್ದರು , ರಾಜ್ಯೋತ್ಸವ ಪ್ರಶಸ್ತಿ ಬಂದವರಿಗೆಲ್ಲ  ಒಂದು ''ಸೈಟ್'' ಸಿಗುತ್ತಂತೆ  ಎಂದು ಕೇಳುತ್ತಲೇ ಕಾಲವಾದರು ಎಂಬುದೂ ಹೇಳಲಾಗದಂತಹ ಮರುಕ ಸಂಕಟ. 

 ಚಿ. ಉದಯಶಂಕರ್  ವಿಜಯನಾರಸಿಂಹ ಸೇರಿದಾಗಲೆಲ್ಲ "ನಮ್ಮನ್ನೇಕೆ ಸಾಹಿತ್ಯ ಪರಿಷತ್ತಿನವರು ಕರೆಸುವುದಿಲ್ಲ? ನಮ್ಮನ್ನೇಕೆ ಗೌರವಿಸುವುದಿಲ್ಲ" ಎಂದುಕೊಳ್ಳುತ್ತಿದ್ದರು. ಹಾಸ್ಯ ಮನೋಭಾವದ ಉದಯಶಂಕರ್ "ಇಲ್ಲ ಲಯನ್, ನನ್ನ ಮಾತು ಕೇಳಿ, ತೆಲುಗು-ತಮಿಳಿನವರಿಗೆ ನಾವೇನೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳಲು ನಾವೇ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಾರ ಹಾಕಿಕೊಂಡು ಕುಳಿತು ಫೋಟೋ ತೆಗೆಸಿಕೊಳ್ಳೋಣ. ತೆಲುಗಿನ ಶ್ರೀಸಮುದ್ರಾಲ ಹಾಗೂ ತಮಿಳಿನ ಕಣ್ಣದಾಸನ್, ವಾಲಿಯವರಿಗೆ ಅಲ್ಲಿನ ಸರ್ಕಾರ ಎಷ್ಟು ಗೌರವಿಸಿದೆ. ನಾವೂ ಸಹ ನಮ್ಮ ಸರ್ಕಾರ ಅವರಿಗೇನು ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಬೇಕು" ಎನ್ನುತ್ತಾ  ಕರ್ನಾಟಕ ಸರಕಾರವನ್ನು  ತಿವಿಯುತ್ತಿದ್ದರಂತೆ . 

ಪಿಬಿಎಸ್  ಅಥವಾ ಜಾನಕಿಯವರ ಸವಿಧ್ವನಿಯಲ್ಲಿ ಗಣಪನ ಈ ಜನಪ್ರಿಯ ಹಾಡುಗಳನ್ನು  ಕೇಳುವಾಗ ವಿಜಯನಾರಸಿಂಹ ಅವರ ಹೆಸರೂ ನಿಮ್ಮ ಮನದಾಳದಲ್ಲಿ ಒಂದು ಬಾರಿಯಾದರೂ ಸುಳಿದಾಡಲಿ ಎನ್ನುವುದೊಂದು ವಿನಮ್ರ ಕೋರಿಕೆ.

ಕಾರಣ ಕೇಳದೆ,ಕಾರಣವಿಲ್ಲದೆ ಕೇಳಿದ್ದೆಲ್ಲಾ ಕೊಡುವ ಕ್ಷಿಪ್ರಪ್ರಸಾದಿ  ಬೆನಕ ಕಳೆದೆರಡು ವರ್ಷಗಳಿಂದ ನೊಂದ-ಬೆಂದ,ಖಿನ್ನಗೊಂಡ  ಎಲ್ಲರ ಮನಸ್ಸನ್ನು ಹಸನಾಗಿಸಲಿ,ಹಸಿರಾಗಿಸಲಿ.


ಶಾಂತಾರಾಮ್ ಶೆಟ್ಟಿ



ಪ್ರೇಮ ಬರಹದ  ಜೈ ಹನುಮಾನ್ ವಿಜಯನರಸಂಹ ಅವರು ಬರೆದ ಕೊನೆಯ ಹಾಡು  ಗೋಟೂರಿಯವರ ಜೊತೆಗೂಡಿ ಬರೆದ ಹಾಡು. 

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.