ರಸವೆಂಬ ವಿಷಕೆ ಬಲಿಯಾದೆ ಏತಕೆ ? ಸುಖ ಶಾಂತಿ ನಾಶಕೆ ಮರುಳಾ.....


 ವಿರಸವೆಂಬ ವಿಷಕೆ  ಬಲಿಯಾದೆ ಏತಕೆ ?  ಸುಖ ಶಾಂತಿ  ನಾಶಕೆ ಮರುಳಾ.....  

--------------------------------------------------------------------------------------

''ನಿನ್ನ ಮನೆಗೆ  ಸಿವಿಲ್ ವ್ಯಾಜ್ಯ  ಬೀಳಲಿ!'' ಇದು ಹಿಂದಿನವರು  ತುಂಬಾ ಮನ ನೊಂದಾಗ  ಹಾಕುತ್ತಿದ್ದ ಹಿಡಿಶಾಪವಂತೆ. ಇದರಲ್ಲೇನು ಅಂತಹ  ತಾಪತ್ರಯ ? ಎಂದು ಮೇಲ್ನೋಟಕ್ಕೆ ಅನಿಸಿದರೂ  ಸಿವಿಲ್  ವ್ಯಾಜ್ಯ  ಇಟ್ಕೊಂಡು  ಕೋರ್ಟಿನಲ್ಲಿ  ವರ್ಷಾನುಗಟ್ಟಲೆ ಹೋರಾಟ ಮಾಡಿದವರನ್ನು ಕೇಳಿದರೆ ಅದರ ಸಂಕಷ್ಟದ ನಿಡಿಸುಯ್ಲು  ನಿಮಗೆ ಈ ಶಾಪದ ಬಿಸಿ ತಟ್ಟಿಸಬಹುದು .  ಕೆಲವೊಮ್ಮೆ ಈ ಸಿವಿಲ್ ವ್ಯಾಜ್ಯಗಳು  ಎರಡು ತಲೆಮಾರು  ದಾಟಿ ಮೂರನೇ ತಲೆಮಾರಲ್ಲಿ   ಪರಸ್ಪರ  ಮಾತುಕತೆಯೊಂದಿಗೆ ಮೊದಲಿದ್ದಲ್ಲಿ ಗೆ ಮುಗಿಯುವುದು ಇದರ  ಆಗಾಧತೆ .  ಅಷ್ಟರಲ್ಲಿ ವಕೀಲರ ಮೂರಂತಸ್ತಿನ  ಮನೆಯ  ಕಲ್ಲು ಸಿಮೆಂಟುಗಳಿಗೆ  ವ್ಯಾಜ್ಯದಾರರ  ಸರ್ವ ಸಂಪತ್ತು  ಸಂದಾಯವಾಗಿರುತ್ತದೆ . ಹಾಗಾಗಿಯೇ ಇರಬೇಕು ಕೋರ್ಟು ವ್ಯವಹಾರದಲ್ಲಿ  ಗೆದ್ದವನು ಸೋತ  ಸೋತವನು ಸತ್ತ ಅನ್ನೋ ಮಾತು ಹುಟ್ಟಿಕೊಂಡಿರುವುದು . 

ಹಠಕ್ಕೆ ಬಿದ್ದು ದ್ವೇಷ  ,  ದ್ವೇಷದಿಂದ ವಿರಸ , ವಿರಸವೇ  ವಿಷ !      ಪ್ರಪಂಚದ ಇವತ್ತಿನ ಸ್ಥಿತಿ ನೋಡಿದವರಿಗೆ   ಮೂರು ದಿನದ ಬಾಳುವೆಗೆ  ಇದೆಲ್ಲಾ ಬೇಕಾ ? ಅನ್ನೋ ಪ್ರಶ್ನೆ ಖಂಡಿತಾ ಮೂಡದೇ ಇರದು!.  ಮನುಷ್ಯ ಇದನ್ನೆಲ್ಲಾ  ನೋಡುತ್ತಾ , ಅಳೆಯುತ್ತಾ  ಬೆಳೆದರೂ  ತನ್ನ ಕಾಲ ಬುಡಕ್ಕೆ ಬಂದಾಗ  ಸೆಟೆದು ನಿಂತು  ಕಾಲು ಕೆರೆದು ಕೋಳಿಜಗಳಕ್ಕೆ  ನಿಲ್ಲುವುದು  ಮಾತ್ರ   ಅವತ್ತಿಂದ ಇವತ್ತಿನವರೆಗೂ  ನಿಂತಿಲ್ಲ . 

ಜಿ.  ಕೆ.  ವೆಂಕಟೇಶ್  ಬಗ್ಗೆ   ಯೋಚಿಸುತ್ತಾ  ಇಷ್ಟೆಲ್ಲಾ ಬರೆಯಬೇಕಾಯ್ತು . ಜಿಕೆವಿ ವ್ಯಕ್ತಿತ್ವನೇ  ಹಾಗೇ ,  ಆಗದ್ದನ್ನು  ಆಗಿಸುವ, ಸಲೀಸಾಗಿಸುವ   ಢಾಳುತನ. ಇಲ್ಲಾಂದ್ರೆ  ''ಸಂಪತ್ತಿಗೆ ಸವಾಲ್''  ನಲ್ಲಿ ಪಿಬಿಶ್ರೀ  ಹಾಡಬೇಕಾಗಿದ್ದ   ''ಎಮ್ಮೆ ಹಾಡನ್ನು'' ಡಾ. ರಾಜ್ ಕೈಯ್ಯಲ್ಲಿ ಹಾಡಿಸಿ  ಕನ್ನಡಕೊಬ್ಬ ''ಗಾಯಕ  ನಾಯಕನನ್ನು'' ಸೃಷ್ಟಿಸಲು ಸಾಧ್ಯವಾಗುತಿತ್ತಾ ? ಪಿಬಿಶ್ರೀ  ಆದರೂ ಅವರೆಂತ ಹೃದಯ ಶ್ರೀಮಂತ ಅಂತೀರಾ ?.   ತನ್ನ ಹಾಡನ್ನು ರಾಜ್  ಹಾಡಿದ್ದಾರೆ ಅಂದಾಗ   ''ಎಷ್ಟು ಚೆನ್ನಾಗಿ ಹಾಡಿದ್ದಾರೆ,    ಅದನ್ನೇ ಇಟ್ಟುಕೊಳ್ಳಿ''  ಎನ್ನುವಷ್ಟು !. 

 ಇಷ್ಟೆಲ್ಲಾ ಶ್ರೇಷ್ಠ ವ್ಯಕ್ತಿತ್ವ  ಇಲ್ಲಾಂದ್ರೆ  ಇಳೆಯರಾಜ , ಎಲ್ ವೈದ್ಯನಾಥನ್ ನಂತಹ  ಸಂಗೀತ ಮಾಂತ್ರಿಕರಿಗೆ ಇವರು  ಗುರುವಾಗುವುದು ಸಾಧ್ಯವಾಗುತಿತ್ತಾ ?. 

ಸಂಗೀತ ನಿರ್ದೇಶಕ  ಎನ್ನುವುದೇನೋ ಸರಿ . ಗಾಯಕ  ಬಂದಿಲ್ಲ  ಏನ್ಮಾಡೋಣ ? ಪಿಬಿಯವರ ಕೈಯ್ಯಲ್ಲಿ  ಕಸ್ತೂರಿ ನಿವಾಸದ   ''ಆಡಿಸುವಾತ ಬೇಸರ ಮೂಡಿ ಆಟ  ಮುಗಿಸಿದ.... ''  ದುಃಖಾಂತ್ಯದ ಹಾಡನ್ನು   ಹಾಡಿಸಲು ಮರೆತೆವಲ್ವಾ , ಮತ್ತೊಮ್ಮೆ ಅವರನ್ನು ಕರೆಸಿ ಆಡಿಸುವುದು  ಅವರಿಗೆ ವೃಥಾ  ತೊಂದರೆಯಲ್ವಾ?  ಇಂತಹ ಸಂದರ್ಭ ಬಂದಾಗಲೆಲ್ಲಾ  ಗಾಯಕನಾಗಿ  ಮೈಕ್ ಎತ್ತಿಕೊಂಡು ಧ್ವನಿ ಕೊಡುವುದು  ಆಪತ್ಬಾಂಧವ ಜಿಕೆ ಗೇನೂ  ಸಮಸ್ಯೆಯೇ  ಅಲ್ಲ . ಹಾಗೆಲ್ಲಾ ಹಾಡಿದ ಹಾಡುಗಳು ಕಂಡರಿಯದ ಕೇಳುವಿಕೆಯಿಂದ  ಇತಿಹಾಸ ಸೃಷ್ಟಿಸಿರುವುದು  ಈತನ ಗಾಯನ ಮಾಂತ್ರಿಕತೆಗೆ  ಕಟ್ಟಿದ ಪಟ್ಟಗಳು.  

''ಭೂತಯ್ಯನ ಮಗ ಅಯ್ಯು'' ಸಿನಿಮಾದಲ್ಲಿ  ಇಂತಹ  ವಿನಾ ವಿರಸದಿಂದ ನಾಶವಾದ  ಎರಡು ಸಂಸಾರಗಳ  ಕತೆಯನ್ನು ಜಿ ಕೆ  ವೆಂಕಟೇಶ್ ಎಂಬ ಮಾಂತ್ರಿಕ ತೆಲುಗು ಬಾಬು ಹಾಡಿದ  ಗೀತೆಯನ್ನು ಕೇಳುತ್ತಾ  ಹೋದರೆ  ಮನುಷ್ಯರ ನಡುವಿನ ಇವತ್ತಿನ ಸಂಕುಚಿತ ಸಣ್ಣ  ಮನಸ್ಸಿಗೆ   ಉತ್ತರವಾಗುವ  ಬೆಳ್ಳಿಗೆರೆಯೊಂದು  ಮಿಂಚಿದರೆ  ಈತನ ಸಾಧನೆಗೆ  ಮತ್ತು ಈ ಅದ್ಭುತ ಹಾಡು ಬರೆದ ಸಾಹಿತಿ ಚಿ ಉದಯ್ ಶಂಕರ್  ಅವರಿಗೆ ಸಲ್ಲುವ  ಸಾತ್ವಿಕ ನಮನವಾಗಬಹುದು. 

 ಸಂಗೀತ ನಿರ್ದೇಶಕನಲ್ಲಿ  ಒಬ್ಬ ಸುಪ್ತ ಗಾಯಕ ಇದ್ದೇ  ಇರುತ್ತಾನಾದರೂ  ಈ  ಹಾಡಲ್ಲಿ  ಜಿ ಕೆ ವಿ  ನಿರ್ದೇಶಕನಿಗಿಂತಲೂ ಗಾಯಕನಾಗೇ ಆಪ್ತವಾಗುತ್ತಾರೆ . ''ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ'' ಎಂದು  ಒಗ್ಗೊಡಿಸಿ ಕರೆದ ಅದ್ಭುತ  ಸಂಗೀತ ನಿರ್ದೇಶಕ ಇಂದು ನಮ್ಮ ಜೊತೆಗಿದ್ದಿದ್ದರೆ   ಸೆಪ್ಟೆಂಬರ್ 21 ಕ್ಕೆ  94  ತುಂಬುತ್ತಿತ್ತು .  ಆದರೆ ಎಲ್ಲವೂ ನಾವಂದಂತೆ ಆಗೋದಿಲ್ಲವಲ್ವಾ ?. 

ಈ ಹಾಡನ್ನು ಹಿತವಾಗಿ  ನಮ್ಮ ತನುವೊಳಗೆ  ನಿಧಾನ ಹನಿಹನಿಯಾಗಿ ಇಳಿಸಿ ''ವಿರಸ ವೆಂಬ ವಿಷಕೆ  ಬಲಿಯಾಗದೆ ಸಮರಸದ ಬಾಳು'' ಬಾಳುವ ಮೂಲಕ ಅವರು ಇಲ್ಲವೆನ್ನುವ ಕೊರತೆಯನ್ನು ನೀಗಿಸಿಕೊಳ್ಳಲು  ಬರಿಯ ನಾಲ್ಕು ನಿಮಿಷಗಳನ್ನು  ನಮ್ಮ ಕಿವಿಗಳಿಗೆ ಇಲ್ಲಿ  ಮೀಸಲಿಟ್ಟರಾಯ್ತು . 

ಕೇಳಿ , ಅನುಭವಿಸಿ ,ಆನಂದಿಸಿ ಮನಃಪೂರ್ವಕವಾಗಿ ಈ ಸಂಗೀತ ಮಾಂತ್ರಿಕನಿಗೊಂದು  ನಸುನಗೆಯ   ನಮನ ಸಲ್ಲಿಸಿ ಎನ್ನುವುದು ಪ್ರೀತಿಯ ಒತ್ತಾಯ . 

 ಶಾಂತಾರಾಮ್ ಶೆಟ್ಟಿ  


https://www.youtube.com/watch?v=Bv2aukpQwKM




Prominent compositions of G. K. Venkatesh in Kannada include:











 

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.