ರಸವೆಂಬ ವಿಷಕೆ ಬಲಿಯಾದೆ ಏತಕೆ ? ಸುಖ ಶಾಂತಿ ನಾಶಕೆ ಮರುಳಾ.....
ವಿರಸವೆಂಬ ವಿಷಕೆ ಬಲಿಯಾದೆ ಏತಕೆ ? ಸುಖ ಶಾಂತಿ ನಾಶಕೆ ಮರುಳಾ..... -------------------------------------------------------------------------------------- ''ನಿನ್ನ ಮನೆಗೆ ಸಿವಿಲ್ ವ್ಯಾಜ್ಯ ಬೀಳಲಿ!'' ಇದು ಹಿಂದಿನವರು ತುಂಬಾ ಮನ ನೊಂದಾಗ ಹಾಕುತ್ತಿದ್ದ ಹಿಡಿಶಾಪವಂತೆ. ಇದರಲ್ಲೇನು ಅಂತಹ ತಾಪತ್ರಯ ? ಎಂದು ಮೇಲ್ನೋಟಕ್ಕೆ ಅನಿಸಿದರೂ ಸಿವಿಲ್ ವ್ಯಾಜ್ಯ ಇಟ್ಕೊಂಡು ಕೋರ್ಟಿನಲ್ಲಿ ವರ್ಷಾನುಗಟ್ಟಲೆ ಹೋರಾಟ ಮಾಡಿದವರನ್ನು ಕೇಳಿದರೆ ಅದರ ಸಂಕಷ್ಟದ ನಿಡಿಸುಯ್ಲು ನಿಮಗೆ ಈ ಶಾಪದ ಬಿಸಿ ತಟ್ಟಿಸಬಹುದು . ಕೆಲವೊಮ್ಮೆ ಈ ಸಿವಿಲ್ ವ್ಯಾಜ್ಯಗಳು ಎರಡು ತಲೆಮಾರು ದಾಟಿ ಮೂರನೇ ತಲೆಮಾರಲ್ಲಿ ಪರಸ್ಪರ ಮಾತುಕತೆಯೊಂದಿಗೆ ಮೊದಲಿದ್ದಲ್ಲಿ ಗೆ ಮುಗಿಯುವುದು ಇದರ ಆಗಾಧತೆ . ಅಷ್ಟರಲ್ಲಿ ವಕೀಲರ ಮೂರಂತಸ್ತಿನ ಮನೆಯ ಕಲ್ಲು ಸಿಮೆಂಟುಗಳಿಗೆ ವ್ಯಾಜ್ಯದಾರರ ಸರ್ವ ಸಂಪತ್ತು ಸಂದಾಯವಾಗಿರುತ್ತದೆ . ಹಾಗಾಗಿಯೇ ಇರಬೇಕು ಕೋರ್ಟು ವ್ಯವಹಾರದಲ್ಲಿ ಗೆದ್ದವನು ಸೋತ ಸೋತವನು ಸತ್ತ ಅನ್ನೋ ಮಾತು ಹುಟ್ಟಿಕೊಂಡಿರುವುದು . ಹಠಕ್ಕೆ ಬಿದ್ದು ದ್ವೇಷ , ದ್ವೇಷದಿಂದ ವಿರಸ...